ಸಂತ್ರಸ್ತರ ಪರ ಸಿಎನ್‍ಸಿ ಅಹೋರಾತ್ರಿ ಪ್ರತಿಭಟನೆ

Posted on: October 10, 2018

4d7e7c6b-073a-4d76-86d7-e2ac3dfee8bc

ಮಡಿಕೇರಿ: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ನಿರಾಶ್ರಿತರಾದವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್‍ಸಿ) ಸಂಘಟನೆ ಹಮ್ಮಿಕೊಂಡಿರುವ 24 ಗಂಟೆಗಳ ಸತ್ಯಾಗ್ರಹ ಬುಧವಾರ ಬೆಳಗ್ಗೆ ನಗರದ ಗಾಂಧಿ ಮೈದಾನದಲ್ಲಿರುವ ಗಾಂಧಿ ಮಂಟಪದ ಎದುರು ಆರಂಭಗೊಂಡಿತು.

ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರ ನೆರವಿಗಾಗಿ ದಾನಿಗಳಿಂದ ಹರಿದು ಬಂದ ಆರ್ಥಿಕ ಮತ್ತು ಸಾಮಗ್ರಿ ನೆರವು, ಈ ಸಂಬಂಧ ಸರಕಾರ ಸಂಗ್ರಹಿಸಿದ ಮತ್ತು ವ್ಯಯಿಸಿದ ಹಣದ ಕುರಿತು ಶ್ವೇತಪತ್ರ ಹೊರಡಿಸಬೇಕು, ತಾತ್ಕಾಲಿಕ ಮತ್ತು ಶಾಶ್ವತ ಪುನರ್ವಸತಿ ಕಲ್ಪಿಸುವ ಸಂಬಂಧದ ನೀಲ ನಕಾಶೆ ಬಿಡುಗಡೆ ಮಾಡಬೇಕು, ಕೊಡಗಿನ ಏಳು ನಾಡುಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪವನ್ನು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಮೂಲಕ ರಾಷ್ಟ್ರೀಯ ವಿಪತ್ತು ನಿರ್ವಹನಾ ಪ್ರಾಧಿಕಾರದೊಂದಿಗೆ ಸಂಯೋಜನೆಗೊಂಡ ವಿಪತ್ತು ನಿರ್ವಹಣಾ ಮಂತ್ರಿಯನ್ನು ನೇಮಿಸಬೇಕು, ಈ ಘೋರ ವಿಪತ್ತಿಗೆ ಕಾರಣವಾಗಿದೆ ಎನ್ನಲಾದ ಹಾರಂಗಿ ಜಲಾಶಯವನ್ನು ಕೆಡವಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಸಿಎನ್‍ಸಿ ಸತ್ಯಾಗ್ರಹ ಆರಂಭಿಸಿದೆ.

ಕೊಡಗು ಮತ್ತು ಕೊಡಗಿನ ಜನ ಸಮೃದ್ಧಿಯಿಂದ ಇದ್ದಷ್ಟು ಕಾಲ ಕರ್ನಾಟಕದ ಖಜಾನೆ ತುಂಬುತ್ತಿತ್ತು. ಇದೀಗ ಪ್ರಾಕೃತಿಕ ವಿಕೋಪದ ಹಿನ್ನೆಲೆ ಪರಿಹಾರದ ಹೆಸರಿನಲ್ಲಿ ಸಾವಿರಾರು ಕೋಟಿ ದೇಣಿಗೆ ಹರಿದು ಬರುವ ಮೂಲಕ ಕರ್ನಾಟಕದ ಖಜಾನೆ ತುಂಬುತ್ತಲೇ ಇದೆ. ಆನೆ ಬದುಕಿದ್ದಾಗ, ಕೋಟಿ ರೂ. ವರಮಾನ ಅದರ ದುಡಿಮೆಯಿಂದ ದೊರಕಿದರೆ, ಆನೆ ಸತ್ತಮೇಲೆ ಅದರ ದಂತ ಮತ್ತು ಅಂಗಾಗಳಿಂದ ಕೋಟಿ ರೂ. ವರಮಾನ ಲಭ್ಯವಾಗುತ್ತದೆ. ಈ ರೀತಿಯ ವಿಪರ್ಯಾಸ ಕೊಡಗಿಗೆ ಬಂದೊದಗಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಬೇಸರ ವ್ಯಕ್ತಪಡಿಸಿದರು.

ಗುರುವಾರ ಬೆಳಗ್ಗೆ 11 ಗಂಟೆಯವರೆಗೂ ಸತ್ಯಾಗ್ರಹ ಮುಂದುವರಿಯಲಿದ್ದು, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರೊಂದಿಗೆ ವಿವಿಧ ನಾಡುಗಳ ಸಂತ್ರಸ್ತರೂ ಭಾಗವಹಿಸಿದ್ದಾರೆ.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *