ಹಾಲೇರಿ ಗ್ರಾಮಸ್ಥರಿಂದ ಸೂಕ್ತ ಪುನರ್ವಸತಿಗೆ ಆಗ್ರಹಿಸಿ ಪ್ರತಿಭಟನೆ

Posted on: October 15, 2018

protest

 

ಮಡಿಕೇರಿ: ಇತ್ತೀಚೆಗೆ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸೋಮವಾರಪೇಟೆ ತಾಲೂಕಿನ ಹಾಲೇರಿ ಗ್ರಾಮದಲ್ಲಿ ಸಾಕಷ್ಟು ಮನೆಗಳು ಹಾನಿಗೊಳಗಾಗಿದ್ದು, ಸೂಕ್ತ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಕೆಲ ಕಾಲ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ತಮ್ಮ ಗ್ರಾಮದ ಸ್ಥಿತಿಗತಿಯನ್ನು ಖುದ್ದು ಪರಿಶೀಲಿಸಿ, ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭ ಮಾತನಾಡಿದ ಹಾಲೇರಿ ಗ್ರಾಮಸ್ಥರಾದ ಬಿದ್ದಪ್ಪ, ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪ ಹೋಬಳಿಯ ಕೆದಕಲ್ ಗ್ರಾ.ಪಂ.ಗೆ ಒಳಪಟ್ಟ ಹಾಲೇರಿ ಗ್ರಾಮವು ಕಳೆದ ಆಗಸ್ಟ್ ನಲ್ಲಿ ಸಂಭವಿಸಿದ ಪ್ರ್ರಾಕೃತಿಕ ವಿಕೋಪದಿಂದ ನಲುಗಿಹೋಗಿದ್ದು, ಭಾರೀ ಮಳೆ ಹಾಗೂ ಭೂಕುಸಿತದಿಂದ 5 ಮನೆಗಳು ಸಂಪೂರ್ಣ ನಾಶವಾಗಿದೆ. ಇದರಿಂದ 55 ರಿಂದ 60 ಕುಟುಂಬಗಳು ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಾಲೇರಿ ಗ್ರಾಮವು ಹೆಮ್ಮೆತ್ತಾಳು, ಮೇಘತ್ತಾಳು ಹಾಗೂ ತಂತಿಪಾಲದ ಬಳಿಯ ಗುಡ್ಡದ ಇನ್ನೊಂದು ಭಾಗದಲ್ಲಿದ್ದು, ಇಡೀ ಗ್ರಾಮದ ಮೇಲ್ಭಾಗದಲ್ಲಿರುವ ಗುಡ್ಡದಲ್ಲಿ 2 ಇಂಚಿನಿಂದ 2 ಅಡಿಗಳವರೆಗೆ ಬಿರುಕುಬಿಟ್ಟು ಭೂಮಿ ಕುಸಿಯುವ ಹಂತವನ್ನು ತಲುಪಿದೆ. ಈಗಾಗಲೇ ಹಾಲೇರಿ ಗ್ರಾಮದ 1737 ಏಕರೆಗಳಲ್ಲಿ 150 ಎಕರೆಯಷ್ಟು ಕುಸಿದು ಹೋಗಿದ್ದು, ಹೆಚ್ಚಿನ ಮಳೆ ಬಂದಲ್ಲಿ ಹಾಲೇರಿ ಗ್ರಾಮವೇ ಕೊಚ್ಚಿ ಹೋಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಲ್ಲಿಯವರೆಗೂ ತಮ್ಮ ಗ್ರಾಮಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಹಾಲೇರಿ ಗ್ರಾಮವು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಾಲೋನಿಯನ್ನು ಒಳಗೊಂಡಿದೆ. ಅಲ್ಲದೆ, ಈ ಗ್ರಾಮದ ನಿವಾಸಿಗಳು ಸಣ್ಣ ರೈತರಾಗಿದ್ದು, ಕೂಲಿ ಕೆಲಸವನ್ನೆ ನಂಬಿಕೊಂಡು ಬದುಕುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ಹಾಲೇರಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸ್ಥಿತಿಗತಿಯನ್ನು ಖುದ್ದು ಪರಿಶೀಲಿಸಿ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಾಲೇರಿ ಗ್ರಾಮ ವ್ಯಾಪ್ತಿಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *