ಬ್ರೇಕಿಂಗ್ ನ್ಯೂಸ್
ಹೈ ಕಮಾಂಡ್ ಸೂಚಿಸಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲು ಮಡಿಕೇರಿ ನಗರ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ , ಕೇಂದ್ರದ 546 ಕೋಟಿ ರೂ. 8 ಜಿಲ್ಲೆಗಳಿಗೆ ವಿನಿಯೋಗ ಮುಖ್ಯಮಂತ್ರಿ ಕುಮಾರಸ್ವಾಮಿ , ಕೊಡಗು ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಸಿಎಂ , ಅಪರಾಧ ತಡೆಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಕೊಡಗು ಎಸ್‍ಪಿ ಸುಮನ್ ಡಿ.ಪೆನ್ನೇಕರ್ , ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ , ಡಿ. 10ರಿಂದ 21ರವರೆಗೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅಲಭ್ಯ , ಅಯ್ಯಂಡ್ರ ರೋಹಿಣಿ ನಾಣಯ್ಯನವರ ಕುಂಚದಲ್ಲಿ ಅರಳಿದ ಭತ್ತದ ತೆನೆಗೂಡು , ಮಡಿಕೇರಿಯಲ್ಲಿ ಸ್ವಚ್ಛತಾ ಜಾಗೃತಿ ಜಾಥ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಜಯ ಚಿಣ್ಣಪ್ಪ  ಕರೆ  , ಗೌಡ ಜನಾಂಗದ ಕ್ರಿಕೆಟ್ ಪಂದ್ಯಾಟ , ಹಳೇ ವಿದ್ಯಾರ್ಥಿಗಳಿಂದ ಕೊಡುಗೆ ,

ತ್ಯಾಲ್ಯ ವಿಲೇವಾರಿಗೆ ಅಗತ್ಯ ಸಹಕಾರ ರಾಬಿನ್ ಉತ್ತಪ್ಪ ಭರವಸೆ

Posted on: November 20, 2018

19mdkn6
ಮಡಿಕೇರಿ: ಮಡಿಕೇರಿ ನಗರಸಭೆ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿರುವ ಕಸಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಅಗತ್ಯ ಸಹಕಾರ ನೀಡಲಾಗುವುದೆಂದು ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ರಾಬಿನ್ ಉತ್ತಪ್ಪ ಘೋಷಿಸಿದರು.

ಮಡಿಕೇರಿ ಕೋಟೆ ಆವರಣದಲ್ಲಿ ಸೋಮವಾರ ಗ್ರೀನ್ ಸಿಟಿ ಫೋರಂ, ಭಾರತೀಯ ಪುರತತ್ವ ಸರ್ವೇಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪಾರಂಪಾರಿಕ ದಿನಾಚರಣೆ, ವಿಶ್ವ ಶೌಚಾಲಯ ದಿನಾಚರಣೆ, ರಾಷ್ಟ್ರೀಯ ಏಕೀಕರಣ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ ತ್ಯಾಜ್ಯದಿಂದ ಸುಬ್ರಮಣ್ಯ ನಗರದ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳು ತನ್ನ ಗಮನಕ್ಕೆ ಬಂದಿದೆ. ಇದರ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಹೇಳಿದರು.

ನಮ್ಮ ಮನೆ, ಊರು, ಜಿಲ್ಲೆ, ರಾಜ್ಯ ಸ್ವಚ್ಛವಾಗಿಟ್ಟುಕೊಂಡಲ್ಲಿ ನಮ್ಮ ದೇಶ ಸ್ವಚ್ಛವಾಗಿರುತ್ತದೆ. ಸ್ವಚ್ಛತೆ ಬಗ್ಗೆ ವಿದ್ಯಾರ್ಥಿ ಜೀವನದಲ್ಲಿಯೇ ಜಾಗೃತಿ ರೂಢಿಸಿಕೊಳ್ಳಬೇಕು. ತ್ಯಾಜ್ಯ ವಸ್ತುಗಳನ್ನು ಬೀದಿಯಲ್ಲಿ ಎಸೆಯುವ ಬದಲು ಕಸದ ತೊಟ್ಟಿಗೆ ಹಾಕಬೇಕು. ಕಸದ ತೊಟ್ಟಿ ಇಲ್ಲದಿದ್ದಲ್ಲಿ ಮನೆ ತೆಗೆದುಕೊಂಡು ಹೋಗಿ ಸಮರ್ಪಕವಾಗಿ ವಿಲೇವಾರಿ ಮಾಡ ಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸ್ವಚ್ಛತೆ ವಿಷಯದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರೀನ್ ಸಿಟಿ ಫೋರಂ ಮಾಡುತ್ತಿರುವ ಕೆಲಸ ಕಾರ್ಯಗಳು ಶ್ಲಾಘನೀಯ. ಈ ಕೆಲಸಕ್ಕೆ ತಾನು ಸಂಪೂರ್ಣ ಸಹಕಾರ ನೀಡು ತ್ತೇನೆಂದು ರಾಬಿನ್ ಉತ್ತಪ್ಪ ಘೋಷಿಸಿದರು.

19mdkn5

ಮಡಿಕೇರಿ ಕೋಟೆ ಮತ್ತು ಕೋಟೆ ಆವರಣದಲ್ಲಿರುವ ಎರಡು ಕಲ್ಲಿನ ಆನೆಗಳನ್ನು ಮಾತ್ರ ಭಾರತೀಯ ಪುರತತ್ವ ಇಲಾಖೆ ಸ್ವಾಧೀನಕ್ಕೆ ಒಪ್ಪಿಸಲಾಗಿದೆ. ಇನ್ನೂ ಕೂಡ ಅರಮನೆ ಒಪ್ಪಿಸಿಲ್ಲ. ಸರ್ಕಾರಿ ಕಚೇರಿಗಳನ್ನು ಸ್ಥಳಾಂತರ ಮಾಡುವುದರ ಮೂಲಕ ಅರಮನೆ ನಮಗೆ ಹಸ್ತಾಂತರಿಸಿದ್ದಲ್ಲಿ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುವುದೆಂದು ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಭಾರತೀಯ ಪುರತತ್ವ ಸರ್ವೇಕ್ಷಣ ಇಲಾಖೆ ಬೆಂಗಳೂರು ವಲಯದ ಮುಖ್ಯ ಅಧೀಕ್ಷಕಿ ಮೂರ್ತೇಶ್ವರಿ ಹೇಳಿದರು.
ಪಾರಂಪಾರಿಕ ತಾಣಗಳನ್ನು ಸಂರಕ್ಷಿಸುವ ಅಗತ್ಯತೆ ಮತ್ತು ಅನಿವಾರ್ಯತೆ ಇದೆ. ಪಾರಂಪರಿಕ ತಾಣಗಳ ಮಹತ್ವದ ಅರಿವು ಹೊಂದಿಲ್ಲದ್ದ ವ್ಯಕ್ತಿಗಳು ಅದನ್ನು ಹಾಳು ಮಾಡುತ್ತಾರೆ. ಪ್ರತಿಯೊಬ್ಬರು ಕೈಜೋಡಿಸಿದ್ದಲ್ಲಿ ಮಾತ್ರ ಈ ಕೆಲಸ ಸಾಧ್ಯವಾಗುತ್ತದೆ. ಮಡಿಕೇರಿ ಕೋಟೆ ಆವರಣದಲ್ಲಿ ಗ್ರೀನ್ ಸಿಟಿ ಫೋರಂ ವತಿಯಿಂದ 12 ದಿನ ಶ್ರಮದಾನದ ಮೂಲಕ ಸ್ವಚ್ಛ ಗೊಳಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಸ್ವಚ್ಛತೆ ಕಾಪಾಡುವುದು ಹಾಗೂ ಪಾರಂಪರಿಕ ತಾಣಗಳ ಸಂರಕ್ಷಣೆ ಬಗ್ಗೆ ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಗ್ರೀನ್ ಸಿಟಿ ಫೋರಂ ವತಿಯಿಂದ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಡಿಕೇರಿ ಕೋಟೆ ಆವರಣ, ತಲಕಾವೇರಿ, ಭಗಂಡೇಶ್ವರ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಸ್ವಚ್ಛತಾ ಕಾರ್ಯದ ಬಗ್ಗೆ ಮಾಹಿತಿ ನೀಡಿದರು.

ಮಹಾತ್ಮ ಗಾಂಧೀಜಿ, ನರೇಂದ್ರ ಮೋದಿ ಕಂಡಿರುವ ಸ್ವಚ್ಛ ಭಾರತದ ಪರಿಕಲ್ಪನೆಗೆ ಪೂರಕವಾಗಿ ಜನತೆ ಸ್ಪಚ್ಛತಾ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ತಮ್ಮ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವ ಜಾಗೃತಿ ಪ್ರತಿಯೊಬ್ಬರಲ್ಲಿಯೂ ಮೂಡುವಂತಾಗಬೇಕೆಂದರು.

ಎರಡು ವರ್ಷಗಳ ಹಿಂದೆಯೇ ಕೊಡಗು ಜಿಲ್ಲೆಯನ್ನು ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಶೌಚಾಲಯ ಇರಬೇಕು. ಪ್ರತಿ ಶೌಚಾಲಯಕ್ಕೆ ಸಂಬಂಧಿಸಿದಂತೆ ಎರಡು ಶೌಚ ಗುಂಡಿ ಇರಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಮನ ಹರಿಸಬೇಕೆಂದು ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯಾ ಹೇಳಿದರು.

ಮಡಿಕೇರಿ ಕೋಟೆ ಆವರಣದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ಕೆ ದೊಡ್ಡಮಟ್ಟದಲ್ಲಿ ಸಹಕಾರ ನೀಡಿದ ಮಡಿಕೇರಿ ಡಿವೈಎಸ್ಪಿ ಕೆ.ಎಸ್. ಸುಂದರ್‍ರಾಜ್ ಅವರನ್ನು ಗ್ರೀನ್ ಸಿಟಿ ಫೋರಂ ವತಿಯಿಂದ ಸನ್ಮಾನಿಸಲಾಯಿತು. ಸ್ವಚ್ಛತಾ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಭರವಸೆ ನೀಡಿ ದರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಜಗನ್ನಾಥ್, ಗ್ರೀನ್ ಸಿಟಿ ಫೋರಂ ಪ್ರಧಾನ ಕಾರ್ಯದರ್ಶಿ ಪೂಳಕಂಡ ರಾಜೇಶ್, ಭಾರತೀಯ ಪುರತತ್ವ ಸರ್ವೇಕ್ಷಣಾ ಇಲಾಖೆ ಇಂಜಿನಿಯರ್ ರಂಗಸ್ವಾಮಿ, ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾದೇಟಿರ ತಿಮ್ಮಯ್ಯ ನಿರೂಪಿಸಿದರು. ಅಂಬೆಕಲ್ ನವೀನ್ ಕುಶಾಲಪ್ಪ ಸ್ವಾಗತಿಸಿದರು. ಪಿ.ಕೃಷ್ಣಮೂರ್ತಿ, ಕಿರಿಯಮಾಡ ರತನ್ ತಮ್ಮಯ್ಯ ಮುಖ್ಯಅತಿಥಿ ಪರಿಚಯ ಮಾಡಿದರು. ಸನ್ಮಾನಿತರ ಪರಿಚಯವನ್ನು ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾಡಿದರು. ಕಿಶೋರ್ ರೈ ಕತ್ತಲೆಕಾಡು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಸಿಕೊಟ್ಟರು. ಗ್ರೀನ್ ಸಿಟಿ ಫೋರಂ ನಿರ್ದೇಶಕಿಯರಾದ ಮೋಂತಿ ಗಣೇಶ್, ಸವಿತಾ ಭಟ್, ಕನ್ನಂಡ ಕವಿತಾ ಬೊಳ್ಳಪ್ಪ ಇದ್ದರು.

19mdkn2

::ಜಾಗೃತಿ ಜಾಥಾ::
ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಸೋಮವಾರ ಗ್ರೀನ್ ಸಿಟಿ ಫೋರಂ ಆಶ್ರಯದಲ್ಲಿ ಮಡಿಕೇರಿ ಮುಖ್ಯಬೀದಿಯಲ್ಲಿ ಜಾಗೃತಿ ಜಾಥಾ ನಡೆಯಿತು. ರಾಜಾಸೀಟ್ ಉದ್ಯಾನ ಮುಂಭಾಗದಿಂದ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತ, ಸ್ಕ್ವಾರ್ಡನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ ವೃತ್ತ, ಇಂದಿರಾಗಾಂಧಿ ವೃತ್ತದ ಮೂಲಕ ಮಡಿಕೇರಿ ಕೋಟೆ ಆವರಣದವರೆಗೆ ಜಾಥಾ ನಡೆಯಿತು.
ಗ್ರೀನ್ ಸಿಟಿ ಫೋರಂ ರಾಯಭಾರಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ರಾಬಿನ್ ಉತ್ತಪ್ಪ, ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಅವರನ್ನು ಪೊನ್ನಚ್ಚನ ಮಧು ಚಾಲನೆ ತೆರೆದ ವಾಹನದಲ್ಲಿ ಜಾಥಾ ದಲ್ಲಿ ಕರೆದುಕೊಂಡು ಹೋದರು. ಜನರಲ್ ಕೆ.ಎಸ್. ತಿಮ್ಮಯ್ಯ ಅವರಿಗೆ ಮಾಲಾರ್ಪಣೆ ಮಾಡಿದ ರಾಬಿನ್ ಉತ್ತಪ್ಪ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದವರೆಗೂ ಪಾದಯಾತ್ರೆ ಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಸಾಗಿ ಬಂದ ಪೊಲೀಸ್ ಬ್ಯಾಂಡ್ ವಿಶೇಷ ಮೆರಗು ನೀಡಿತ್ತು. ಶಾಲಾ ಕಾಲೇಜು ವಿದ್ಯಾರ್ಥಿಗಳು, ಎನ್‍ಸಿಸಿ, ಸೇವಾದಳ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

19mdkn1

::ಬಾಟಲ್ ಡ್ರಾಪರ್::
ರಾಜಾಸೀಟ್ ಉದ್ಯಾನ ಪ್ರವೇಶದ್ವಾರ ಮುಂಭಾಗದಲ್ಲಿ ನಿರುಪಯುಕ್ತ ಬಾಟಲಿಗಳನ್ನು ವಿಲೇವಾರಿ ಮಾಡಲು ಬಾಟಲ್ ಡ್ರಾಪರ್ ಘಟಕ ಸ್ಥಾಪಿಸಲಾಗಿದೆ. ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ವೈಯುಕ್ತಿಕವಾಗಿ 11 ಸಾವಿರ ರೂ. ವಿನಿಯೋಗಿಸಿ ಈ ಘಟಕವನ್ನು ಸ್ಥಾಪಿಸಲಿದ್ದಾರೆ. ಗ್ರೀನ್ ಸಿಟಿ ಫೋರಂ ನಿರ್ದೇಶಕಿ ಮೋಂತಿ ಗಣೇಶ್ ಪರಿಕಲ್ಪನೆಯಲ್ಲಿ ಈ ಘಟಕ ಸ್ಥಾಪಿಸಲಾಗಿದೆ. ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ರಾಬಿನ್ ಉತ್ತಪ್ಪ, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಈ ಘಟಕಕ್ಕೆ ಚಾಲನೆ ನೀಡಿದರು.

19mdkn4

::ಛಾಯಾಚಿತ್ರ ಪ್ರದರ್ಶನ::
ರಾಷ್ಟ್ರೀಯ ಏಕೀಕರಣ ಸಪ್ತಾಹ ಪ್ರಯುಕ್ತ ಮಡಿಕೇರಿ ಕೋಟೆ ಆವರಣದಲ್ಲಿರುವ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಚೇರಿ ಸಮೀಪದಲ್ಲಿರುವ ಕೊಠಡಿಯಲ್ಲಿ ರಾಷ್ಟ್ರದ ಪಾರಂಪರಿಕ ತಾಣಗಳನ್ನು ಪರಿಚಯಿಸುವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ರಾಬಿನ್ ಉತ್ತಪ್ಪ, ಜಿಪಂ ಸಿಇಒ ಲಕ್ಷ್ಮೀಪ್ರಿಯಾ ಉದ್ಘಾಟಿಸಿದರು. ಭಾರತೀಯ ಪುರತತ್ವ ಸರ್ವೇಕ್ಷಣಾ ಇಲಾಖೆ ಬೆಂಗಳೂರು ವಲಯದ ಮುಖ್ಯ ಅಧೀಕ್ಷಕಿ ಮೂರ್ತೇಶ್ವರಿ, ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಸ್ಥಾಪಕಾಧ್ಯಕ್ಷ ಚೈಯ್ಯಂಡ ಸತ್ಯ, ನಿರ್ಗಮಿತ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಇದ್ದರು.

19mdkn7

19mdkn3

ನಿಮ್ಮ ಅಭಿಪ್ರಾಯ ತಿಳಿಸಿ

Your email address will not be published. Required fields are marked *